ಆಂಡೊಸಿಡೀಸ್ó
	(ಸು.ಕ್ರಿ.ಪೂ. 440-390). ಅಥೆನ್ಸ್‍ನ ವಾಗ್ಮಿ ರಾಜ ಕಾರಿಣಿ ಅಟಿಕ್‍ನ ಹತ್ತು ಮಂದಿ ಪ್ರಸಿದ್ಧರಲ್ಲೊಬ್ಬ. ಹರ್ಮಿ ದೇವತೆಯ ಅಂಗಚ್ಛೇದನದ ಸಂಬಂಧವಾಗಿ ವಿಚಾರಣೆಗೆ ಒಳಗಾದವರಲ್ಲಿ ಒಬ್ಬ. ಅಪಮಾನದ ಅಥವಾ ದೇಶ ಭ್ರಷ್ಠತೆಯ ದಂಡವನ್ನು ವಿಧಿಸಲಾಯಿತು. ಇವನ ಭಾಷಣಗಳಲ್ಲಿ ಮೂರು ಉಳಿದು ಬಂದಿವೆ. ಅಥೆನ್ಸ್‍ಗೆ ಹಿಂದಿರುಗಲು ಅಪ್ಪಣೆ ಬೇಡುವ--ನಿರರ್ಥಕವಾದ--ಭಾಷಣ ಒಂದು (ಕ್ರಿ.ಪೂ. 410), ಎರಡನೆಯದು ತನ್ನ ಮೇಲೆ ಹೊರಿಸಿದ ಒಂದು ಆಪಾದನೆಗೆ ಉತ್ತರವಾಗಿ ರಹಸ್ಯಕರ್ಮಗಳನ್ನು ಕುರಿತ ಭಾಷಣ ಇನ್ನೊಂದು (ಕ್ರಿ.ಪೂ. 399). ಮತ್ತು ಸ್ಟಾರ್ಟದೊಂದಿಗೆ ಶಾಂತಿಮಾಡಿಕೊಳ್ಳುವುದನ್ನು ಸಮರ್ಥಿಸಿದ ರಾಜಕೀಯ ಭಾಷಣ ಮೂರನೆಯದು. ಇವನ ವಾಗ್ಮಿತೆಯಲ್ಲಿ ಸುಶಿಕ್ಷಿತನ ನಯವಿರಲಿಲ್ಲ. ಆದರೆ ಬುದ್ಧಿವಂತಿಕೆಯಿಂದ ಮನಮುಟ್ಟುವಂತೆ ಸಹಜವಾಗಿ ಈತ ಮಾತನಾಡಬಲ್ಲನಾಗಿದ್ದನಾದರೂ ಮನವೊಪ್ಪುವಂಥ ಮಾತುಗಾರನೇನಲ್ಲ.
(ಕೆ.ಎ.; ಎಚ್.ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ